ಬಳ್ಳಾರಿ. ಏ.೨೩ (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಏಪ್ರಿಲ್ ೨೩ ರಂದು ೨೧೮೨ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೧೮೬ ಗ್ರಾಮ ಪಂಚಾಯತ್‌ಗಳ ೩೩೭೩ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಏಪ್ರಿಲ್ ೨೩ ರಂದು ೨೧೮೨ ನಾಮಪತ್ರಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ೭೭೦ನಾಮಪತ್ರಗಳು ಮಹಿಳಾ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿವೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ೪೧೬ ನಾಮಪತ್ರಗಳು ಅವುಗಳಲ್ಲಿ ೧೫೫ ನಾಮಪತ್ರಗಳು ಮಹಿಳೆಯರಿಂದ ಸಲ್ಲಿಕೆಯಾಗಿವೆ. ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ೪೩೮ ( ಮಹಿಳೆ ೧೬೨), ಹಿಂದುಳಿದ ಅ ವರ್ಗದ ಅಭ್ಯರ್ಥಿಗಳಿಂದ ೫೬೯ ನಾಮಪತ್ರಗಳು ( ಮಹಿಳೆ ೨೧೫) ಹಿಂದುಳಿದ ಬಿ ವರ್ಗದ ಅಭ್ಯರ್ಥಿಗಳಿಂದ ೧೨೯ ( ಮಹಿಳೆ ೩೯) ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ೬೩೦ ( ಮಹಿಳೆ ೨೦೩ ) ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ; ನಿಷೇದಾಜ್ಞೆ
ಬಳ್ಳಾರಿ. ಏ.೨೩ (ಕರ್ನಾಟಕ ವಾರ್ತೆ) : ಸಿಇಟಿ ( ಸಾಮಾನ್ಯ ಪ್ರವೇಶ ಪರೀಕ್ಷೆ) ಏಪ್ರಿಲ್ ೨೮ ಮತ್ತು ೨೯ ರಂದು ಜಿಲ್ಲೆಯಲ್ಲಿ ೭ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾಜಿ ಪುರಸಭೆ), ವಾಡ್ಲಾ ಸಂಯುಕ್ತ ಪದವಿ ಪೂರ್ವ ಕಾಲೇಜು, ಎಸ್.ಜಿ. ಸಂಯುಕ್ತ ಪದವಿ ಪೂರ್ವ ಕಾಲೇಜು, ವೀರಶೈವ ಕಾಲೇಜು ಮತ್ತು ಅಲ್ಲಂ ಸುಮಂಗಳಮ್ಮ ಬಾಲಕಿಯರ ಕಾಲೇಜು ಸೇರಿದಂತೆ ೫ ಕೇಂದ್ರಗಳು ಹಾಗೂ ಹೊಸಪೇಟೆ ನಗರದಲ್ಲಿರುವ ಚಿತ್ತವಾಡಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ವಿಜಯ ನಗರ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಈ ಪರೀಕ್ಷಾ ಕೇಂದ್ರಗಳ ಸುತ್ತ ಶಾಂತಿಯನ್ನು ಕದಡಬಾರದು. ಯಾವುದೇ ಸ್ಪೋಟಕ ವಸ್ತು, ಮಾರಕಾಸ್ತ್ರಗಳನ್ನು ಒಯ್ಯುಬಾರದು ಎಂದು ಅವರು ಆದೇಶಿಸಿದ್ದಾರೆ.
ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಸೂಚನೆ
ಬಳ್ಳಾರಿ. ಏ.೨೩ (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ಸರಬರಾಜು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್‍ಯದರ್ಶಿಗಳಾದ ಶ್ರೀ ಅಶೋಕ ಕುಮಾರ ಮನೋಲಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಗ್ರಾಮ, ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗಬಾರದು. ಕುಡಿಯುವ ನೀರು ಸರಬರಾಜಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ೫೬ ಕಾಮಗಾರಿಗಳ ಅನುಷ್ಠಾನಕ್ಕಾಗಿ ೧.೦೭ ಕೋಟಿ ರೂ. ಹಾಗೂ ಜಿಲ್ಲಾ ಪಂಚಾಯತಿಯು ೫೬ ಕಾಮಗಾರಿಗಳ ಅನುಷ್ಠಾನಕ್ಕಾಗಿ ೮೦ ಲಕ್ಷ ರೂ. ಅನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ ೨೫೫ ಗ್ರಾಮಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೊಳವೆ ನೀರು ಪೂರೈಕೆ ಪುನಶ್ಚೇತನಕ್ಕಾಗಿ ೧೩೬ ಕಾಮಗಾರಿಗಳು, ಕಿರುನೀರು ಪೂರೈಕೆ ಪುನಶ್ಚೇತನಕ್ಕಾಗಿ ೧೨೨ ಕಾಮಗಾರಿಗಳು, ಕೊಳವೆ ಬಾವಿ ದುರಸ್ತಿಯಡಿ ೨೭೫ ಕಾಮಗಾರಿಗಳು, ಹೊಸದಾಗಿ ಕೊಳವೆಬಾವಿಗಳನ್ನು ಕೊರೆದು ಮೋಟರ್ ಅಳವಡಿಸಲು ೧೦೪ ಕಾಮಗಾರಿಗಳು, ಹೈಡ್ರೋಫ್ರಾಕ್ಚರಿಂಗ್‌ನಡಿ ೧೩೩ ಕಾಮಗಾರಿಗಳು ಸೇರಿದಂತೆ ಒಟ್ಟು ೭.೯೭ ಕೋಟಿ ರೂ. ವೆಚ್ಚದ ೭೭೨ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಕುಡಿಯುವ ನೀರು ಪೂರೈಕೆ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕವನ್ನು ಶೀಘ್ರವಾಗಿ ನೀಡಬೇಕು. ಯಾವುದೇ ನ್ಯೂನತೆಗಳಾಗದಂತೆ ಜಾಗೃತಿವಹಿಸಬೇಕು ಎಂದು ಅವರು ಸೂಚಿಸಿದರು.
ಮುಂಗಾರಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆಯಾಗಬೇಕು. ಯಾವುದೇ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆವಹಿಸಿ ಕ್ರಮಕೈಗೊಳ್ಳಬೇಕು. ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೊಳಗಾದರೆ ಪೂರಕ ಬೆಳೆಯ ಬಗ್ಗೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಿಕೊಳ್ಳಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನವಗ್ರಾಮಗಳಿಗೆ ಮೂಲಭೂತ ಸೌಕರ್‍ಯಗಳನ್ನು ಒದಗಿಸಬೇಕು. ಗ್ರಾಮಗಳ ವಿನ್ಯಾಸ, ರಸ್ತೆ, ಚರಂಡಿ, ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಜಿಲ್ಲಾ ಪಂಚಾಯತ್ ಇಂಜಿನಿಯರ್‌ಗಳು ಈ ಕಾಮಗಾರಿಗಳನ್ನು ಇನ್ನು ೧೫ ದಿನಗಳಲ್ಲಿ ಪ್ರಗತಿ ತೋರಿಸದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನವಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಶೀಘ್ರವಾಗಿ ಕಲ್ಪಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯಕಾರ್‍ಯನಿರ್ವಾಹಕ ಅಧಿಕಾರಿಗಳು ಈ ಕುರಿತು ಪದೇ ಪದೇ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು, ನಿರ್ವಹಣೆ ಮಾಡಬೇಕು. ಪಡಿತರ ಚೀಟಿ ವಿತರಣೆಯಲ್ಲಿ ಯಾವುದೇ ತೊಂದರೆಯಾಗಬಾರದು. ಭಾಗ್ಯಲಕ್ಷ್ಮಿ ಬಾಂಡ್, ಗಂಗಾಕಲ್ಯಾಣ ಯೋಜನೆ, ಪರಿಶಿಷ್ಟರ ಅಭಿವೃದ್ಧಿ, ಸಾಮಾಜಿಕ ಭದ್ರಾ ಯೋಜನೆಗಳು, ದೇವದಾಸಿಯರ ಅಭಿವೃದ್ಧಿಗಾಗಿ ಇರುವ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಶಾಲಾ ಮಕ್ಕಳು ಬಿಸಿಯೂಟನ್ನು ಮಾಡುವಂತೆ ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು ತಪ್ಪಿಸಿ, ಶಾಲೆಗೆ ಬರುವಂತೆ ಪ್ರೇರಿಸುವಂತ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಮಗುವು ವಿದ್ಯಾಭ್ಯಾಸ ಪಡೆಯುವಂತಾಗಬೇಕು. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯುವಂತಾಗಬೇಕು. ಶಾಲಾ ಮಕ್ಕಳಿಗೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಕುರಿತು ತರಬೇತಿ ನೀಡಲಾಗುವುದು. ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಸ್ಥಳವನ್ನು ನೀಡಿ, ಅನುಷ್ಠಾನಗೊಳಿಸಬೇಕು. ತಾಲ್ಲೂಕ ಮತ್ತು ಹೋಬಳಿ ಮಟ್ಟಕ್ಕೆ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಅಂಗವಿಕಲರಿಗೆ ಶೇ. ೩ ರಷ್ಟು ಉದ್ಯೋಗ ಮೀಸಲಾತಿ ಹಾಗೂ ಸೌಲಭ್ಯಗಳ ವಿತರಣೆ ಕುರಿತು ಪರಿಶೀಲಿಸಬೇಕು. ಎಲ್ಲಾ ಇಲಾಖೆಗಳು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಗರ್ಭಿಣಿಯರಿಗೆ ಆಸ್ಪತ್ರೆಯಲ್ಲೇ ಹೆರಿಗೆಯಾಗುವಂತೆ ಕ್ರಮಕೈಗೊಳ್ಳಬೇಕು. ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಬೇಕು. ಯಾವುದೇ ಇಲಾಖೆಯು ಯಾವುದೇ ಅನುದಾನವನ್ನು ಹಿಂದಿರುಗಿಸಬಾರದು. ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಬಹುತೇಕ ಎಲ್ಲಾ ಇಲಾಖೆಗಳು ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ ಎಂದ ಅವರು, ಅಧಿಕಾರಿಗಳು ಕೇವಲ ಅಂಕೆ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್‍ಯನಿರ್ವಹಿಸದೇ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತಹ, ಕೊಡುಗೆಯಾಗುವಂತಹ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು, ನೆರೆಪೀಡಿತ ಸಂತ್ರಸ್ತರ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ನಿರ್ಮಿಸಲಾಗುತ್ತಿರುವ ನವಗ್ರಾಮಗಳಲ್ಲಿ ಮೂಲಭೂತ ಸೌಕರ್‍ಯಗಳನ್ನು ಶೀಘ್ರವಾಗಿ ಒದಗಿಸಬೇಕು. ಆದ್ಯತೆಯ ಮೇರೆಗೆ ಈ ಕಾಮಗಾರಿಗಳನ್ನು ನಿರ್ವಹಿಸಬೇಕು ಇಲ್ಲವಾದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು. ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಪ್ರಾರಂಭಿಸಿ, ಯೋಜನಾಬದ್ದವಾಗಿ ಪೂರ್ಣಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್‍ಯನಿರ್ವಾಹಕ ಅಧಿಕಾರಿ ಶ್ರೀ ಎಸ್. ರಾಜರಾಂ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.